SHARE

ಬೆಳಗಾವಿ:ಶಾಲಾ ಆಟೊ ಶುಕ್ರವಾರ ಪ್ರಾರಂಭವಾಗುವ ಮಧ್ಯೆಯೇ ಪಾಲಕರಿಂದ ಎರಡು ಪಟ್ಟು ಹಣ ಕೀಳಲು ಚಾಲಕರು ಪ್ಲಾನ್ ಮಾಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚುವರಿ ಮಕ್ಕಳನ್ನು ಕರೆದೊಯ್ಯದಂತೆ ಸೂಚಿಸಿದ ಪೊಲೀಸ್ & ಆರ್ ಟಿಓ ಇಲಾಖೆಗಳ ಜೊತೆಗೆ ಕಾಲು ಕೆದರಿ ನಿಂತ ಆಟೊ ಚಾಲಕರು, ಇಲಾಖೆಗಳ ಮೃದು ಧೋರಣೆಯನ್ನೇ ದುರುಪಯೋಗಪಡಿಸಿಕೊಂಡು ಈಗ ಪಾಲಕರ ಹಣ ಸುಲಿಯಲು ಮುಂದಾಗಿದ್ದಾರೆ.
ಕೆಲವರು ₹1200 ಆದ್ರೆ ಬರ್ತಾರಂತೆ :*ಇಲ್ಲಿಯವರೆಗೆ ಪ್ರತಿ ಮಗುವಿಗೆ ₹ 500 ಪಡೆಯುತ್ತಿದ್ದ ಆಟೊ ಚಾಲಕರ ಪೈಕಿ ಕೆಲವರು ₹600 ಪಡೆಯುತ್ತಿದ್ದರು. ಆಟೊ ಪಲ್ಟಿ ಘಟನೆ ನಂತರ ಆಡಳಿತದ ವಿರುದ್ಧವೇ ಮನಸೋ ಇಚ್ಚೇ ಪ್ರತಿಭಟನೆಗಿಳಿದ ಆಟೊ ಚಾಲಕರನ್ನು ಜಿಲ್ಲಾಡಳಿತ ಸರಿಯಾಗಿ ನಿಭಾಯಿಸದ್ದರಿಂದ ಈಗ ಆಟಾಟೋಪ ಸೃಷ್ಟಿಯಾಗಿದೆ.
ಶುಕ್ರವಾರದಿಂದ ಆಟೋ ಚಲಾವಣೆ ಮಾಡಲು ಒಪ್ಪಿಕೊಂಡು ಬಂದಿರುವ ಚಾಲಕರು ದುಪ್ಪಟ್ಟು ಶುಲ್ಕ ₹1200 ಕ್ಕೇ ಬೇಡಿಕೆ ಇಟ್ಟಿದ್ದಾರೆ.

ಇದು ಅತಿಯಾಯ್ತು, ಬೇರೆ ನೊಡ್ಕೊಳ್ಳೋಣ:ಇದರಿಂದ ಪಾಲಕರು ರೋಷಗೊಂಡಿದ್ದು ಪರ್ಯಾಯ ಆಲೋಚನೆ ಮಾಡಿದ್ದಾರೆ. ಆಯಾ ಶಾಲೆಗಳೇ ತಮ್ಮ ಬಸ್ & ವ್ಯಾನ್ ಬಿಟ್ಟು ಮಕ್ಕಳನ್ನು ಕರೆದೊಯ್ಯಲು ಕೋರಲು ಪಾಲಕರು ಈಗ ಒಟ್ಟಾಗಿದ್ದಾರೆ. ಓಮಿನಿ ವ್ಯಾನ್ ಇಲ್ಲವೇ ಖಾಸಗಿ ವಾಹನಗಳ ಸಂಪರ್ಕ ಸಾಧಿಸಿರುವ ಪಾಲಕರು ಆಟೋ ಚಾಲಕರನ್ನು ಮುಗುಚಿ ತಮ್ಮ ಹಾದಿ ತಾವು ಹಿಡಿಯಲು ಇಂದು ಸಂಜೆ ಗಂಭೀರ ಚಿಂತನೆ ನಡೆಸಿದರು.
ಶಿಸ್ತುಕ್ರಮ:5+1 ಹೊರತುಪಡಿಸಿ ಹೆಚ್ಚುವರಿ ಮಕ್ಕಳನ್ನು ಕರೆದೊಯ್ದರೇ ಹುಷಾರ್ ಎಂದು ಪೊಲೀಸ್ ಆಯುಕ್ತ ಲೊಕೇಶಕುಮಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಮೊಂಡ ಚಾಲಕರು ಪಾಲಕರ ರಕ್ತ ಬಗೆಯಲು ದುಪ್ಪಟ್ಟು ಹಣ ಕೇಳುತ್ತಿದ್ದು ಪಾಲಕರ ಅಸಹಾಯಕತೆ ಜೊತೆಗೆ ಆಟ ಆಡಲು ಹೋಗಿ ತಾವೇ ಮೂಲೆ ಸೇರುವ ಅಂತಿಮ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಪೊಲೀಸರು, ಆರ್ ಟಿಓ ಹಾಗೂ ಮಕ್ಕಳ ಪಾಲಕರನ್ನು ಎದುರು ಹಾಕಿಕೊಂಡಿರುವ ಆಟೋ ಚಾಲಕರು ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ಉದ್ಯೋಗವಿಲ್ಲದೇ ಇಂಗುತಿಂದ ಮಂಗನಂತೆ ಪರಿತಪಿಸುವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ.