SHARE

ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ತರಾತುರಿಯಲ್ಲಿ ಸಂಸದ ಸುರೇಶ ಅಂಗಡಿ ಅವರು ಉದ್ಘಾಟನೆ ಮಾಡಿದ್ದ ಶ್ರೀ ಬಸವೇಶ್ವರ ರೈಲ್ವೆ ಓವರ್ ಬ್ರೀಡ್ಜ್ ಬಿರುಕು ಬಿಟ್ಟಿದೆ. ಈ ಕಳಪೆ ಕಾಮಗಾರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭ್ರಷ್ಟಾಚಾರ ನಿರ್ಮೂಲನ ಪರಿವಾರ ಸಂಘಟನೆ ಅಧ್ಯಕ್ಷ ಸುಜೀತ್ ಮುಳಗುಂದ ಒತ್ತಾಯಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಭ್ರಷ್ಟಾಚಾರ ನಿರ್ಮೂಲನ ಪರಿವಾರದ ಪದಾಧಿಕಾರಿಗಳು ಕಳಪೆ ಗುಣಮಟ್ಟದ ರೈಲ್ವೇ ಓವರ್ ಬ್ರೀಡ್ಜ್ ಕಾಮಗಾರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕೇವಲ ಆರು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿರುವ ರೈಲ್ವೇ ಓವರ್ ಬ್ರೀಡ್ಜ್ ಬಿರುಕು ಬಿಟ್ಟಿದೆ. ಅಲ್ಲದೇ ಬ್ರೀಡ್ಜ್ ಫೂಟಪಾತ್ ಕೂಡ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿದೆ. 110 ವರ್ಷಗಳ ಹಿಂದೆ ನಿರ್ಮಿಸಿದ್ದ ರೈಲ್ವೇ ಮೇಲ್ಸೆತುವೆ ಇನ್ನು ಕೂಡ ಗಟ್ಟಿ ಮುಟ್ಟಾಗಿತ್ತು. ಅದನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಿದ್ದ ಗೋಗಟೆ ಸರ್ಕಲನಿಂದ ಶ್ರೀ ಬಸವೇಶ್ವರ ಸರ್ಕಲ ವರೆಗಿನ ಈ ಸೇತುವೆ ಮಧ್ಯ ರಸ್ತೆಯಲ್ಲಿಯೇ ಬಿರುಕು ಮೂಡಿರುವುದು ಸಾರ್ವಜನಿಕರಿಗೆ ತೀವ್ರ ಆತಂಕ ಮೂಡಿಸಿದೆ. ಆದ್ದರಿಂದ ದೇಶದಲ್ಲಿನ ಭ್ರಷ್ಟಾಚಾರವನ್ನು ಕಿತ್ತೊಗೆಯುವ ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಅವರು ಬೆಳಗಾವಿ ರೈಲ್ವೇ ಮೇಲ್ಸೆತುವೆಯ ಭ್ರಷ್ಟಾಚಾರದಲ್ಲಿ ಭಾಗಿ ಆಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅವಿನಾಶ ವೇಲಂಗಿ, ನಾಗಪ್ಪ ಲಾಡ್, ಸಂಜಯ ಪಾಟೀಲ, ಅಶ್ವಿನಿ ಲೆಂಗಡೆ, ಮನೋಜ ನಾಕಾಡಿ, ಜಿ.ಎನ್.ಗುಂಡಕಲ್, ಅಶೋಕ ಪಾಟೀಲ, ಗಜಾನನ ಪಾವಲೆ, ಆಂಥೋನಿ ಡಿಸಿಲ್ವಾ, ಸಂತೋಷ ಜಂತಿಕಟ್ಟಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.