SHARE

ಬೆಂಗಳೂರು: ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಷ್​​ ಇಂದು ಬಿಜೆಪಿ ಹಿರಿಯ ಮುಖಂಡ ಎಸ್​​.ಎಂ ಕೃಷ್ಣ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ರು. ಭೇಟಿ ಬಳಿಕ ಮಾತನಾಡಿದ ಅವರು, ಮಂಡ್ಯದಲ್ಲಿ ನಡೆದ ಚುನಾವಣೆ ಕೇವಲ ಒಂದು ಪಕ್ಷದ್ದಲ್ಲ. ನಾನು ಎಲ್ಲಾ ಪಕ್ಷದ ಅಭ್ಯರ್ಥಿ ಎನ್ನುವಂತೆ ಇತ್ತು. ನನಗೆ ಬಿಜೆಪಿ ಬೆಂಬಲ ಕೊಟ್ಟಿತ್ತು, ಕಾಂಗ್ರೆಸ್​ ಬಂಡಾಯ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ. ನನಗೆ ಮಂಡ್ಯದ ಜನ ಆಶೀರ್ವಾದ ಮಾಡಿದ್ದಾರೆ. ಮೇ 29ರಂದು ಮಂಡ್ಯಗೆ ಹೋಗ್ತೀನಿ .ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಇನ್ನು ಇದೇ ವೇಳೆ ನೀವು ಬಿಜೆಪಿ ಸೇರ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಚುನಾವಣೆ ಸಂದರ್ಭದಲ್ಲೇ ಹೇಳಿದಂತೆ ಮಂಡ್ಯದ ಜನರ ಅಭಿಪ್ರಾಯ ಪಡೆದು ನಂತರ ಬಿಜೆಪಿಗೆ ಬೆಂಬಲ ನೀಡಬೇಕಾ ಬೇಡ್ವಾ ಅನ್ನೋದನ್ನ ನಿರ್ಧರಿಸುತ್ತೇನೆ ಎಂದರು. ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳ್ತೀನಿ. ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೂ ಸಹಕಾರ ನೀಡುತ್ತದೆ ಅನ್ನೋ ಭರವಸೆ ನನಗಿದೆ ಅಂತ ಹೇಳಿದ್ರು.

ಮಂಡ್ಯ ರೈತರಿಗೆ ಕೆಆರ್​​​ಎಸ್​​ನಿಂದ ನೀರು ಬಿಡಿಸೋದು ಸುಮಲತರಾ ಅವರ ಜವಾಬ್ದಾರಿ ಎಂಬ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಉತ್ತರಿಸಿದ ಅವರು, ನಾನು ಉತ್ತರ ಕೊಡಬೇಕಿರೋದು ನನ್ನನ್ನು ಗೆಲ್ಲಿಸಿರುವ ಜನರಿಗೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಏನೇನು ಕೆಲಸ ಮಾಡಬೇಕಿದೆ ಅನ್ನೋ ಬಗ್ಗೆ ನನ್ನ ವಿಷನ್ ಇದೆ. ಯಾರೋ ಪ್ರಶ್ನೆ ಕೇಳಿದ್ರು ಅಂತ ಹೇಳಲ್ಲ. ನನ್ನ ಕೆಲಸ ನಾನು ಮಾಡಿಕೊಂಡು ಹೋಗ್ತೀನಿ ಅಂದ್ರು.