SHARE

ಬೆಂಗಳೂರು: ಇಂದು ಬಿಜೆಪಿ ಮುಖಂಡ ಎಸ್​​.ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್​ ರೆಬೆಲ್​ ಶಾಸಕ ರಮೇಶ್​ ಜಾರಕಿಹೊಳಿ, ನಾನು ಕೃಷ್ಣ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಎಂದು ಹೇಳಿದ್ದಾರೆ. ಎಸ್.ಎಂ ಕೃಷ್ಣ ನಿವಾಸದಲ್ಲಿ ಇಂದು ಕಾಂಗ್ರೆಸ್​​  ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಸುಧಾಕರ್​​ ರಾಜಕೀಯ ಚರ್ಚೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಆಪರೇಷನ್​​ ಕಮಲಕ್ಕೆ ಕೃಷ್ಣ ಸಾರಥ್ಯವಹಿಸಿದ್ದಾರೆ ಎಂದು ಹೇಳಲಾಗಿತ್ತು.

ಈ ವಿಚಾರವಾಗಿ ಎಸ್​​ಎಂಕೆ ಭೇಟಿ ಬಳಿಕ ಮಾತನಾಡಿದ ರಮೇಶ್​ ಜಾರಕಿಹೊಳಿ, ನಾನೀಗ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ರಾಜೀನಾಮೆ ಯಾವಾಗ ಕೊಡ್ತೀನಿ ಅಂತ ನಾನು ಈಗಲೇ ಹೇಳಲ್ಲ ಅಂದ್ರು. ಎಸ್‌ಎಂ ಕೃಷ್ಣ ಹಿರಿಯ ರಾಜಕಾರಣಿ. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬೇರೆ ರಾಜಕೀಯ ವಿಚಾರ ಚರ್ಚೆ ಆಗಿಲ್ಲ. ಎಸ್.ಎಂ ಕೃಷ್ಣ ಯಾವುದೇ ಪಕ್ಷದಲ್ಲಿರಲಿ ನಮ್ಮ ನಾಯಕರು. ರಾಜೀನಾಮೆ ಕೊಡ್ತೀವಿ, ಆದ್ರೆ ಯಾವಾಗ ಕೊಡ್ತೀವಿ ಅಂತ ನಿಮಗೆ ಹೇಳೋದಕ್ಕೆ ಆಗಲ್ಲ ಅಂತ ಹೇಳಿದ್ರು.

ಇದೇ ವೇಳೆ ಶಾಸಕ ಸುಧಾಕರ್​ ಮಾತನಾಡಿ, ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿದ್ದರೂ ಆದರ್ಶ ವ್ಯಕ್ತಿತ್ವ ಉಳ್ಳವರು. ನಾವು ಕೃಷ್ಣರನ್ನ ಭೇಟಿಯಾಗಿದ್ದೆವು ಅಷ್ಟೇ. ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿಲ್ಲ ಅಂತ ಹೇಳಿದ್ರು. ಎಸ್.ಎಂ ಕೃಷ್ಣ ಅವರು ನನ್ನ ರಾಜಕೀಯ ಗುರುಗಳು. ಅವರು ನನ್ನ ತಂದೆ ಸಮಾನ. ಇದು ನನ್ನ ವೈಯಕ್ತಿಕ ಭೇಟಿ. ನನ್ನ ಮನೆಗೆ ರಮೇಶ್ ಬಂದಿದ್ರು, ನಾನು ಹೀಗೆ ಕೃಷ್ಣ ಅವರ ಮನೆಗೆ ಹೋಗುತ್ತಿದ್ದೇನೆ ಅಂದೆ. ಅವರು ನಾನೂ ಬರುತ್ತೇನೆ ಅಂದ್ರು. ಹಾಗಾಗಿ ನಾವಿಬ್ಬರು ಒಟ್ಟಿಗೆ ಬಂದೆವು ಅಂತ ಸುಧಾಕರ್​ ಹೇಳಿದ್ರು. ಇದು ಅನಿರೀಕ್ಷಿತ ಭೇಟಿ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಅಂತ ಸ್ಪಷ್ಟನೆ ನೀಡಿದ್ರು.

ಚರ್ಚೆ ವೇಳೆ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಆರ್.ಅಶೋಕ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಕಾಂಗ್ರೆಸ್ ಶಾಸಕರ ಜೊತೆ ಮಾತನಾಡಿಲ್ಲ. ಯಡಿಯೂರಪ್ಪ ಜೊತೆ ಎಸ್.ಎಂ.ಕೃಷ್ಣರನ್ನ ಭೇಟಿ ಮಾಡಲು ಬಂದಿದ್ದೆ ಎಂದರು. ಪಕ್ಷದ ವಿಚಾರವಾಗಿ ಮಾತನಾಡಲು ಬಂದಿದ್ದೆವು. ಇವತ್ತೂ ಕೋ ಇನ್ಸಿಡೆಂಟ್‌ ಆಗಿದೆ. ಎಲ್ಲರೂ ಒಟ್ಟಾಗಿ ಬಂದಿದ್ದಾರೆ. ಎಸ್.ಎಂ ಕೃಷ್ಣ ಅವರ ಮನೆ ರಾಜಕೀಯ ತಾಣ ಅಲ್ಲ ಅಂತ ಹೇಳಿದ್ರು. ಮೈತ್ರಿ ಸರ್ಕಾರದ ಅಸ್ಥಿರತೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ಅಸ್ಥಿತ್ವದ ಬಗ್ಗೆ ನಾನು ಏನೂ ಹೇಳಲು ಆಗಲ್ಲ. ಅದು ರೇವಣ್ಣ ಹೇಳ್ಬೇಕು, ನಿಂಬೆಹಣ್ಣು ಹೇಳ್ಬೇಕು ಅಂತ ವ್ಯಂಗ್ಯವಾಡಿದ್ರು.