SHARE

ನವದೆಹಲಿ: ಸಂಸದೀಯ ನಾಯಕನನ್ನಾಗಿ ಮಾಡಿದ ತಮಗೆಲ್ಲರಿಗೂ ನಾನು ಆಭಾರಿ ಅಂತಾ ಅಂತಾ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್​ ಸೆಂಟ್ರಲ್ ಹಾಲ್​ನಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ನರೇಂದ್ರ ಮೋದಿಯನ್ನ ಎರಡನೇ ಬಾರಿಗೆ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಇದಾದ ನಂತರ ನೂತನ ಸಂಸದರನ್ನ ಉದ್ದೇಶಿಸಿ ಮಾತನಾಡಿದ ಸಂಸದೀಯ ನಾಯಕ ನರೇಂದ್ರ ಮೋದಿ, ಎರಡನೇ ಬಾರಿಗೆ ನನ್ನನ್ನ ಆಯ್ಕೆ ಮಾಡಿದ ತಮಗೆಲ್ಲರಿಗೂ ಧನ್ಯವಾದಗಳು ಅಂತಾ ಹೇಳಿದರು.

ದೇಶದ ಜನರು ನಮ್ಮ ಸೇವಾ ಭಾವವನ್ನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ನಾವು ಜನರ ಸೇವೆ ಮಾಡಲು ಸದಾ ಸಿದ್ಧರಿರಬೇಕು. ಪ್ರತೀ ಹೆಜ್ಜೆ ಇಡುವಾಗಲೂ ಜನರಿಗೆ ಸಹಾಯ ಮಾಡಲು ತಯಾರಿ ಇರಬೇಕು. ದೇಶದ ಜನರು ಹೊಸ ಯುಗವನ್ನ ಆರಂಭಿಸಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಾವೆಲ್ಲರೂ ಚುನಾಯಿತ ನಾಯಕರು. ನಾನು ಇದರ ಒಂದು ಭಾಗ ಅಂತಾ ನಂಬಿದ್ದೇನೆ. ನಾನು ನಿಮ್ಮಲ್ಲಿ ಒಬ್ಬನಾಗಿರುತ್ತೇನೆ, ನಿಮಗೆ ಸಮನಾಗಿರುತ್ತೇನೆ ಎಂದರು.

2019ರ ಚುನಾವಣೆ ದೇಶದಲ್ಲಿ ಯೂನಿಕ್ ಆಗಿ ನಡೆಯಿತು. ಚುನಾವಣೆಗಳು ಸಾಮಾನ್ಯವಾಗಿ ವಿಭಜಿಸುತ್ತವೆ. ಆದರೆ ನಮಗೆ ಸಕರಾತ್ಮಕ ವೋಟ್​ ಸಿಕ್ಕಿವೆ. ಜಾಗತಿಕವಾಗಿ ಹೇಳುವುದಾರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಎಷ್ಟು ನಂಬರ್ ಆಫ್ ವೋಟ್​ ಬಿದ್ದಿದ್ದವೋ ಅದಕ್ಕಿಂತ ಹೆಚ್ಚು ಮತಗಳು ಈ ಬಾರಿ ಬಿಜೆಪಿಗೆ ಬಿದ್ದಿವೆ. 2014 ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಸಿಕ್ಕ ಮತದಾನ ಶೇ.25 ರಷ್ಟು ಹೆಚ್ಚಾಗಿದೆ. 17 ರಾಜ್ಯಗಳಲ್ಲಿ ನಮಗೆ ಶೇ.50ಕ್ಕಿಂತ ಹೆಚ್ಚು ಮತಗಳು ಬಂದಿವೆ ಅಂತಾ ಹೇಳಿದರು.

ಹೃದಯ ಗೆಲ್ಲುವ ಕೆಲಸ ಮಾಡಿ
ನಾನು ವೋಟ್ ಕೇಳಲು ಹೋಗಿಲ್ಲ, ಧನ್ಯವಾದ ಹೇಳಲು ಹೋಗಿದ್ದೆ. ಈಗ ನಮಗೆ ಮತ್ತೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಇನ್ಮುಂದೆ ನಿಮ್ಮ ಗ್ರಾಮದವರು ನಮಗೆ ಏನು ಮಾಡಿದ್ದಾರೆ ಅಂತಾ ಕೇಳುವ ಹಾಗಿಲ್ಲ. ಯಾವಾಗಲೂ ಹೃದಯ ಗೆಲ್ಲುವ ಕೆಲಸ ಮಾಡಬೇಕು ಎಂದು ನೂತನ ಸಂಸದರಿಗೆ ಕಿವಿಮಾತು ಹೇಳಿದರು.

ದೇಶವನ್ನ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಪ್ರಾದೇಶಿಕ ಆಶಯಗಳು, ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿಗೆ ಗೌರವ ಕೊಡಬೇಕಾಗಿದೆ. ಹಿಂದಿಯಲ್ಲಿ ‘ನರ’ (NARA) ಅನ್ನೋ ಘೋಷಣೆ ಇದೆ. ಇದರ ಅರ್ಥ ರಾಷ್ಟ್ರೀಯ ಗುರಿ ಮತ್ತು ಪ್ರಾದೇಶಿಕ ಆಶಯಗಳು ಎಂದರ್ಥ. ಇವೆಲ್ಲವನ್ನೂ ನಾವು ಗೌರವಿಸಬೇಕು ಅಂತಾ ಹೇಳಿದರು.

ಅನವಶ್ಯಕ ಹೇಳಿಕೆ ನೀಡಿದ್ರೆ ಹುಷಾರ್..!
ಸಾರ್ವಜನಿಕವಾಗಿ ಮಾತನಾಡುವಾಗ ಒಂದು ಜವಾಬ್ದಾರಿ ಇರುತ್ತೆ. ಮೊದಲು ಯೋಚನೆ ಮಾಡಿ, ಮಾತನಾಡಿ. ನಿಮ್ಮಷ್ಟಕ್ಕೆ ನೀವು ಅನಗತ್ಯ ಹೇಳಿಕೆಗಳನ್ನ ಯಾವತ್ತೂ ಕೊಡಬೇಡಿ. ಮಾಧ್ಯಮಗಳು ನಿಮ್ಮ ಮಾತಿಗಾಗಿ ಕಾಯುತ್ತಿರುತ್ತವೆ. ಆಫ್​ ದಿ ರೆಕಾರ್ಡ್​ ಎಂದು ಕರೆಯೋದು ಏನೂ ಇಲ್ಲ. ಮಾತನಾಡುವಾಗ ಜಾಗೃತೆಯಿಂದ ಮಾತನಾಡಿ, ಸತ್ಯ ಏನು ಅನ್ನೋದನ್ನ ತಿಳಿದು ಮಾತನಾಡಿ ಅಂತಾ ಸಂಸದರಿಗೆ ತಿಳಿ ಹೇಳಿದರು.