SHARE

ಲಂಡನ್: 2019ರ ಏಕದಿನ ವಿಶ್ವಕಪ್ ಭಾಗವಾಗಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‍ಗಿಳಿದ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಳ್ಳಲಿಲ್ಲ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ತಲಾ ಎರಡು ರನ್ ಗಳಸಿ ವಿಕೆಟ್ ಒಪ್ಪಿಸಿದರು.

ಇಬ್ಬರು ಆರಂಭಿಕರು ವಿಫಲರಾದ ಹಿನ್ನೆಲೆಯಲ್ಲಿ ನಂ.3 ಆಟಗಾರನ ಸ್ಥಾನದಲ್ಲಿ ಕೊಹ್ಲಿ ಹಾಗೂ 4ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಪಡೆದರು. ಆ ಮೂಲಕ ಬಹುದಿನಗಳಿಂದ ಟೀಂ ಇಂಡಿಯಾಗೆ ತಲೆನೋವಾಗಿದ್ದ ಕ್ರಮಾಂಕಕ್ಕೆ ಕೊಹ್ಲಿ ಉತ್ತರ ನೀಡಿದ್ದರು. ಆದರೆ ರಾಹುಲ್ ಕೇವಲ 6 ರನ್ ಗಳಿಸಿ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನಿಂಗ್ಸ್‍ನ 6ನೇ ಓವರಿನ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತ್ತು. ಇದರ ಬೆನ್ನಲ್ಲೇ ತಂಡಕ್ಕೆ ಆಸರೆಯಾಗಿ ನಿಂತಿದ್ದ ಕೊಹ್ಲಿ ಕೂಡ 18 ರನ್ ಗಳಿಸಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ 50 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತ ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಸಿದ್ಧ ಎಂದು ಕೆಎಲ್ ರಾಹುಲ್ ಸ್ಪಷ್ಟಪಡಿಸಿದ್ದರು. ಅಲ್ಲದೇ ಟೂರ್ನಿಯಲ್ಲಿ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ತಯಾರಿ ನಡೆಸಿದ್ದಾಗಿ ನಡೆಸಿದ್ದಾಗಿ ಹೇಳಿದ್ದರು.