SHARE

ನವದೆಹಲಿ: ನರೇಂದ್ರ ಮೋದಿಯನ್ನ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಎನ್​ಡಿಎ ನಿಯೋಗ ರಾಷ್ಟ್ರಪತಿಗಳನ್ನ ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಬಿಜೆಪಿ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಎಲ್​ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಣ್, ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ, ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರನ್ನ ಭೇಟಿ ಮಾಡಿದರು. ಈ ವೇಳೆ ನರೇಂದ್ರ ಮೋದಿ ಅವರನ್ನ ಸಂಸದೀಯ ನಾಯಕರನ್ನಾಗಿ ಬಹುಮತದೊಂದಿಗೆ ಆಯ್ಕೆ ಮಾಡಿರುವ ಬಗ್ಗೆ ಲೆಟರ್​ ಹೆಡ್ ಕೊಟ್ಟು, ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಮೂಲಗಳ ಮಾಹಿತಿ ಪ್ರಕಾರ ಮೇ 30 ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.


ಇದಾದ ಬಳಿಕ ನರೇಂದ್ರ ಮೋದಿಯೇ ಖುದ್ದು ರಾಷ್ಟ್ರಪತಿಗಳನ್ನ ಭೇಟಿಯಾಗಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ಅವಕಾಶ ನೀಡುವಂತೆ ಹಕ್ಕು ಮಂಡನೆ ಮಾಡಿದ್ರು. ನಂತರ ಮಾತನಾಡಿದ ಮೋದಿ, ದೇಶದ ಜನರು ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಮಾಡಲು ರಾಷ್ಟ್ರಪತಿಗಳ ಬಳಿ ಹಕ್ಕು ಮಂಡಿಸಿದ್ದೇವೆ. ರಾಷ್ಟ್ರಪತಿಗಳು ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.