SHARE

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಂದು ಪಕ್ಷ ಹಾಗೂ ವ್ಯಕ್ತಿ ಪರ ಸುಳ್ಳು ವರದಿ ತೋರಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ ಹೊರತು ಎಕ್ಸಾಟ್ ಪೋಲ್ ಅಲ್ಲ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಧ್ಯಮಗಳ ಸಮೀಕ್ಷೆಯ ಬಗ್ಗೆ ಕಿಡಿಕಾರಿದ್ದಾರೆ.

ದೇಶದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನ ಬಿಂಬಿಸಲು ಎಕ್ಸಿಟ್​ ಪೋಲ್ ಸಮೀಕ್ಷೆಯನ್ನ ಬಳಸಿಕೊಳ್ಳಲಾಗ್ತಿದೆ. ಮೇ 23ರ ಬಳಿಕ ಏನಾದ್ರೂ ಹೆಚ್ಚುಕಡಿಮೆಯಾದ್ರೆ ಯಾವುದಕ್ಕೂ ಇರಲಿ ಅಂತ ಬಿಜೆಪಿ ಸ್ಥಳೀಯ ಪಕ್ಷಗಳನ್ನು ಸೆಳೆಯಲು, ಕೃತಕವಾದ ಅಥವಾ ಉತ್ಪಾದಿತವಾದ ಮೋದಿ ಅಲೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇಡೀ ಎಕ್ಸಿಟ್​ ಪೋಲ್​ ಕಸರತ್ತು, ಒಂದು ಪಕ್ಷ ಅಥವಾ ಒಬ್ಬ ನಾಯಕನ ಪರವಾಗಿ ಅಲೆ ಇದೆ ಎಂದು ಬಿಂಬಿಸಲು ನಡೆಸಿದ ಪ್ರಯತ್ನ. ಇದು ಕೇವಲ ಎಕ್ಸಿಟ್​​ ಪೋಲ್​ ಅಷ್ಟೇ, ಎಕ್ಸಾಕ್ಟ್​ ಪೋಲ್​ ಅಲ್ಲ ಎಂದು ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಟ್ವೀಟ್‍ಗಳಲ್ಲಿ ಏನಿದೆ?
ಎಲ್ಲಾ ವಿರೋಧ ಪಕ್ಷಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್ ಪೇಪರ್ ಗಳನ್ನು ಆಯ್ಕೆ ಮಾಡುತ್ತಿದ್ದಾರೆ. 2019 ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.